ಮಧುರ ಕಂಠದ ಕೋಗಿಲೆ ಎಂದೇ ಹೆಸರಾದ ಶ್ರೀಮತಿ ಎಚ್.ಆರ್. ಲೀಲಾವತಿ ಅವರು ಭಾವಪೂರ್ಣಗಾಯನ ಹಾಗೂ ಸ್ಟಷ್ಟ ಉಚ್ಚಾರಣೆಯಿಂದಾಗಿ ಸುಗಮ ಸಂಗೀತ, ಅಂದರೆ ಭಾವಗೀತಾ ವಲಯದಲ್ಲಿ ಅತ್ಯಂತ ಉನ್ನತ ಶ್ರೇಣಿಯ ಗಾಯಕಿ ಎಂದೆನಿಸಿ ಮನೆಮನೆಯ ಮಾತಾಗಿದ್ದಾರೆ. ಎಂಭತ್ತೇಳರ ಹರಯದ ಈ ಕನ್ನಡತಿ, ಗಾಯಕಿಯಾಗಿ 1950ರಲ್ಲಿಯೇ ಈ ಸುಗಮ ಸಂಗೀತ ಕ್ಷೇತ್ರದಲ್ಲಿ ಹೆಜ್ಜೆಯನ್ನೂರಿದವರು. ನಂತರದ ದಿನಗಳಲ್ಲಿ ಸಂಗೀತ ಸಂಯೋಜಕಿಯಾಗಿ, ಕವಯಿತ್ರಿಯಾಗಿಯೂ ರೂಪುಗೊಂಡವರು. ಸುಗಮ ಸಂಗೀತದ ಆರಂಭದ ದಿನಗಳಿಂದಲೇ ಆ ಕ್ಷೇತ್ರದಲ್ಲಿ ನೆಲೆಯೂರಿ ಅದನ್ನು ಮುನ್ನತಿಗೆ ತಂದು, ಇಂದು ಆ ಶೈಲಿ ಉನ್ನತ ಮಟ್ಟಕ್ಕೇರುವ ಕೈಂಕರ್ಯದಲ್ಲಿ ತೊಡಗಿಸಿಕೊಂಡವರಲ್ಲಿ ಅತಿ ಮುಖ್ಯರಾದವರು ಇವರು.
ದಶಕ ದಶಕಗಳಿಂದ, ಪೀಳಿಗೆಯಿಂದ ಪೀಳಿಗೆಗೆ ಲೀಲಾವತಿಯವರ ಸಿರಿಕಂಠದ ಮಾಧುರ್ಯ ಆಕಾಶವಾಣಿ ಕೇಂದ್ರದ ಮೂಲಕ ಮನೆಮನೆಯ ಕದವನ್ನು ತಟ್ಟಿ ಭಾವಗೀತಾಪ್ರಿಯರನ್ನು ಮೋಡಿಮಾಡಿದೆ.
ಲೀಲಾವತಿಯವರು ಸುಸಂಸ್ಕೃತ ಸಂಗೀತದ ಮನೆತನದಲ್ಲಿ ಜನಿಸಿದವರು. ಇವರ ಕರ್ನಾಟಕ ಶಾಸ್ತ್ರೀಯ ಸಂಗೀತದ ಗುರುಗಳು, ಸುಪ್ರಸಿದ್ಧ ವಾಗ್ಗೇಯಕಾರರಾಗಿದ್ದ ಮೈಸೂರು ವಾಸುದೇವಾಚಾರ್ಯರ ಪಟ್ಟ ಶಿಷ್ಯರಾದ ಸಂಗೀತ ವಿದ್ಯಾನಿಧಿ ಎನ್. ಚೆನ್ನಕೇಶವಯ್ಯನವರು. ಶಾಸ್ತ್ರೀಯ ಸಂಗೀತದ ಭದ್ರ ಬುನಾದಿ ಹಾಗೂ ಲೀಲಾವತಿಯವರ ಸಾಹಿತ್ಯ ಪ್ರೇಮದಿಂದಾಗಿ, ಸುಗಮ ಸಂಗೀತ ಇನ್ನೂ ಶೈಶವಾವಸ್ಥೆಯಲ್ಲಿದ್ದಾಗಲೇ ಅದರತ್ತ ಆಕರ್ಷಿತರಾದರು. ಪಿಟೀಲು ವಿದ್ವಾಂಸರು ಹಾಗೂ ಸಂಗೀತ ಸಂಯೋಜಕರಾಗಿ ಆಕಾಶವಾಣಿಯಲ್ಲಿ ದುಡಿಯುತ್ತಿದ್ದ ಪದ್ಮಚರಣ್ (ಎ.ವಿ. ಕೃಷ್ಣ ಮಾಚಾರ್ಯ) ಲೀಲಾವತಿಯವರಿಗೆ ಸುಗಮ ಸಂಗೀತದ ಗುರುಗಳಾದರು.
ಲೀಲಾವತಿಯವರು ಆಕಾಶವಾಣಿಯಲ್ಲಿ ಸುಗಮ ಸಂಗೀತ, ಜನಪದಗೀತೆ, ದಾಸರಪದ ಹಾಗೂ ವಚನ ಗಾಯನದಲ್ಲಿ ’ಎ’ ಶ್ರೇಣಿಯ ಕಲಾವಿದೆ, ಹಾಗೂ ‘ಎ’ ಟಾಪ್ ಶ್ರೇಣಿಯ ಸಂಗೀತ ಸಂಯೋಜಕಿ. ಇದರ ಜೊತೆಗೆ ಹಿಂದಿ ಗೀತೆ ಹಾಗೂ ಭಜನ್ ಹಾಡುವುದರಲ್ಲೂ ಪರಿಣತಿ ಪಡೆದ ಗಾಯಕಿ.
ಲೀಲಾವತಿಯವರು ಆಕಾವಾಣಿಯಲ್ಲಿ ಹಾಡುವುದರ ಜೊತೆಗೆ ಲೆಕ್ಕವಿಲ್ಲದಷ್ಟು ಕಾರ್ಯಕ್ರಮಗಳನ್ನು ಭಾರತ ಹಾಗೂ ಹೊರ ದೇಶಗಳಲ್ಲಿ ನೀಡಿದ್ದಾರೆ. ಕಲ್ಕತ್ತೆಯ ರಾಬಿನ್‍ರೇಯವರಲ್ಲಿ ರಬೀಂದ್ರ ಸಂಗೀತವನ್ನು ಕಲಿತಿದ್ದಾರೆ, ಹಾಗೂ ವೇದಿಕೆಯಲ್ಲಿ ಹಾಡಿದ್ದಾರೆ. ಭಾರತದ ಅನೇಕ ಆಕಾಶವಣಿ ಕೇಂದ್ರಗಳಲ್ಲಿ ಸುಮಾರು ಒಂಭತ್ತು ಭಾಷೆಗಳಲ್ಲಿ ಹಾಡಿ ಬಿತ್ತರಿಸಿದ್ದಾರೆ. 1983ರಲ್ಲಿ ಅಮೆರಿಕೆಯ ನ್ಯೂಜೆರ್ಸಿಯ ಟ್ರೆಂಟನ್ ನಗರದಲ್ಲಿ ನಡೆದ ಪ್ರಪ್ರಥಮ ವಿಶ್ವಕನ್ನಡ ಸಮ್ಮೇಳನದ ರಾಯಭಾರಿಯಾಗಿ ಸುಗಮ ಸಂಗೀತವನ್ನು ಹಾಡಲು ಕರ್ನಾಟಕ ರಾಜ್ಯ ಸರ್ಕಾರ ಲೀಲಾವತಿಯವರನ್ನು ಕಳುಹಿಸಿಕೊಟ್ಟಿತ್ತು.
1998ರಲ್ಲಿ ಅಮೆರಿಕೆಯ ಅರಿಝೋನದಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನಕ್ಕೂ ರಾಜ್ಯ ಸರ್ಕಾರ ಲೀಲಾವತಿಯವರನ್ನು ಕಳುಹಿಸಿತ್ತು.
2010ರಲ್ಲಿ ಅಮೆರಿಕೆಯ ಲಾಸಾಂಜಲೀಸ್‍ನಲ್ಲಿ ನಡೆದ ಕನ್ನಡ ಸಮ್ಮೇಳನದಲ್ಲಿ ಲೀಲಾವತಿಯವರು ವಿದ್ವತ್ ಪೂರ್ಣ ಭಾಷಣವನ್ನು ಮಾಡಿದರು.